ಕಲ್ಯಾಣಾದ್ಭುತ ಗಾತ್ರಾಯ ಕಾಮಿತಾರ್ಥ ಪ್ರದಾಯಿನೇ |
ಶ್ರೀ ಮದ್ವೇಂಕಟನಾಥಾಯ ಶ್ರೀನಿವಾಸಾಯ ತೇ ನಮಃ ||
ಹರೇ ಶ್ರೀನಿವಾಸ
ಹರೇ ಶ್ರೀನಿವಾಸ
ಹರೇ ಶ್ರೀನಿವಾಸ
ಓಂ ಶ್ರೀ ವೆಂಕಟೇಶಾಯ ಮಂಗಳಂ
150 ವರ್ಷಗಳ ಪ್ರಾಚೀನ ರಕ್ತಚಂದನದ ವಿಗ್ರಹಗಳು
ಈ ವೆಂಕಟರಮಣ ವಿಗ್ರಹ ಎಡಬದಿ ಮಹಾಲಕ್ಷ್ಮಿ ಬಲಭಾಗದಲ್ಲಿ ಪದ್ಮಾವತಿ ವಿಗ್ರಹಗಳನ್ನು ಹೊಂದಿದೆ. ಮುಂದೆ ಆಂಜನೇಯ, ಗಣೇಶ, ಲಕ್ಷ್ಮಿ, ರಾಮ, ಮುಂತಾದ ದೇವರುಗಳ ವಿಗ್ರಹಗಳು ಮಣೆಯಲ್ಲಿ ಎಲ್ಲಾ ದೇವರುಗಳನ್ನು ಅವರವರ ಸ್ಥಳಗಳಲ್ಲಿ ಕೂರಿಸುವಂತೆ ವಿನ್ಯಾಸ ಮಾಡಿರುವುದು ಸಹ ಒಂದು ವಿಶೇಷ.
ಮೂಲ ಕಥೆ
ಶ್ರೀಯುತರಾದ ಬಾಲಗಾರ್ ಶ್ಯಾಮರಾವ್ ಮತ್ತು ಪದ್ಮಾವತಿ ಎಂಬ ದಂಪತಿಗಳ ಮನೆಯಲ್ಲಿ ನಡೆದ ಸತ್ಯ ಕಥೆಯನ್ನು ತಮ್ಮ ಮುಂದಿಡಲು ಇಚ್ಛಿಸುತ್ತೇನೆ.
ಶ್ರೀಯುತ ಬಾಲಗಾರ್ ಶ್ಯಾಮರಾವ್ ಮತ್ತು ಪದ್ಮಾವತಿ ಎಂಬ ದಂಪತಿಗಳು ಸುಮಾರು 120 ವರ್ಷಗಳ ಹಿಂದೆ ವಾಸವಾಗಿದ್ದರು. ಇವರು ಮೈಸೂರು, ಬೆಂಗಳೂರು, ತಿರುಪತಿ ಮುಂತಾದ ಕಡೆಗಳಲ್ಲಿ ವಾಸ ಮಾಡಿ ಕೊನೆಗೆ ಬಳ್ಳಾರಿಯಲ್ಲಿ ವಾಸ ಮಾಡುತ್ತಿದ್ದರು.
ಮಕ್ಕಳ ಶಿಕ್ಷಣ
ಶ್ರೀಯುತ ಬಾಲಗಾರ್ ಶ್ಯಾಮರಾಯರಿಗೆ ಭೀಮಾಚಾರ್, ರಾಮಾಚಾರ್, ಶಾಂತ, ಲಕ್ಷ್ಮೀ ಮತ್ತು ರಮಾಬಾಯಿ ಎಂಬ ಐದು ಮಕ್ಕಳ ಜನನವಾಯಿತು. ದೊಡ್ಡ ಮಗ ಭೀಮಾಚಾರ್ ಅವರು ಕಾರಣಾಂತರಗಳಿಂದ ತೀರಿಕೊಂಡರು. 2ನೇ ಮಗ ರಾಮಾಚಾರ್ ಅವರನ್ನು ತಿರುಪತಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸಕ್ಕಾಗಿ ಬಿಟ್ಟಿದ್ದರು. ಮುಂದೆ ರಾಮಾಚಾರ್ ಅವರು ಕಾಶಿಯಲ್ಲಿ ವಿದ್ಯಾಭ್ಯಾಸ ಮಾಡಿ ಬಳ್ಳಾರಿಯಲ್ಲಿ ವಾಡ್ರ್ಲ್ ಹೈಸ್ಕೂಲ್‍ನಲ್ಲಿ ಹಿಂದಿ ಪಂಡಿತರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಮಕ್ಕಳ ಮದುವೆ
ಶಾಂತ ಅವರನ್ನು ಸಿರಗುಪ್ಪದ ಹನುಮಂತರಾಯ ಅವರಿಗೆ, ಲಕ್ಷ್ಮಿ ಅವರನ್ನು ಗುಂಟೂರಿನ ನರಸಿಂಹಾಚಾರ್ ಅವರಿಗೆ ಹಾಗೂ ರಮಾಬಾಯಿ ಅವರನ್ನು ಹೊಸಪೇಟೆಯ ಕೃಷ್ಣಮೂರ್ತಿ ಎಂಬುವರಿಗೆ ಕೊಟ್ಟು ವಿವಾಹ ಮಾಡಿದರು. ಈ ಹಂತಗಳಿಗೆ ಮಕ್ಕಳನ್ನು ತರಲು ಹರಸಾಹಸ ಪಡಬೇಕಾಯಿತು.
ಬಾಲಗಾರ್ ಶ್ಯಾಮರಾಯರ ವೃತ್ತಿ ಜೀವನ
ಈ ಜೀವನಪಥ ಸಾಗಿಸಲು ಏನಾದರೊಂದು ಕರ್ತವ್ಯ ನಿರ್ವಹಿಸಬೇಕಲ್ಲವೇ ? ಬಾಲಗಾರ್ ಶ್ಯಾಮರಾವ್‍ರವರು ಒಂದು ಟೈಲರ್ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಆಗ ಇವರ ಆದಾಯಕ್ಕೆ ಕೊರತೆ ಇರಲಿಲ್ಲ.
ಒಮ್ಮೆ ಬ್ರಿಟಿಷ್ ಅಧಿಕಾರಿಗಳು ಇವರ ಟೈಲರ್ ಅಂಗಡಿಗೆ ಬಂದು ನಮಗೆ ಸೂಟು, ಕೋಟು, ಪ್ಯಾಂಟುಗಳನ್ನು ಹೊಲೆದು ಕೊಡುವಿರಾ? ಎಂದು ಕೇಳಿದಾಗ ಸಂತೋಷದಿಂದ ಒಪ್ಪಿಕೊಂಡರು. ಅದರಿಂದ ವ್ಯಾಪಾರವೂ ವೃದ್ಧಿಯಾಯಿತು, ಆದಾಯವೂ ಹೆಚ್ಚಾಯಿತು.
ಬ್ರಿಟಿಷ್ ಅಧಿಕಾರಿಗಳು, ಬೇಟೆಯಾಡಲು ಆಗಾಗ ಕಾಡಿಗೆ ಹೋಗುತ್ತಿದ್ದರು. ಅವರ ಜೊತೆ ಬಾಲಗಾರ ಶ್ಯಾಮರಾಯರನ್ನು ಕರೆದುಕೊಂಡು ಹೋಗುತ್ತಿದ್ದರು. ಆದರೆ, ಅವರು ಕಾಡಿಗೆ ಹೋಗಿ ಬೇಟೆಯಾಡುವುದು ಅವರ ಪತ್ನಿ ಪದ್ಮಾವತಮ್ಮರವರಿಗೆ ಸ್ವಲ್ಪವೂ ಇಷ್ಟವಿರಲಿಲ್ಲ. ಪದ್ಮಾವತಮ್ಮ ಅವರು ನಾವು ಬ್ರಾಹ್ಮಣರಾಗಿ ಹುಟ್ಟಿ ಪ್ರಾಣಿವಧೆ ಮಾಡುವುದು ಮಹಾ ಪಾಪದ ಕೆಲಸವೆಂದು ಎಷ್ಟು ತಡೆ ಹಾಕಿದರು ಸಹ ಕೇಳುತ್ತಿರಲಿಲ್ಲ. ದೇವರಲ್ಲಿ ನಂಬಿಕೆ ಇಲ್ಲದಿರುವುದರಿಂದ ಅವರು ದೈವ ಭಕ್ತರಾದ ಹೆಂಡತಿ ಮಾತನ್ನು ಕೇಳುತ್ತಿರಲ್ಲಿಲ್ಲ, ಇದನ್ನರಿತ ಅವರು ಮನದಲ್ಲಿ ನೊಂದುಕೊಂಡು ಸುಮ್ಮನಾಗಿ ಬಿಡುತ್ತಿದ್ದರು.
ತಿರುಪತಿಗೆ ಭೇಟಿ - ಜೀವನವನ್ನು ಬದಲಿಸಿದ ಘಟನೆ
ಬಾಲಗಾರ್ ಶ್ಯಾಮರಾವ್‍ರವರ ಮನೆದೇವರು ತಿರುಪತಿ ತಿಮ್ಮಪ್ಪ, ಒಮ್ಮೆ ಮನೆದೇವರ ದರ್ಶನ ಮಾಡಲು ಕುಟುಂಬ ಸಮೇತರಾಗಿ ತಿರುಪತಿಗೆ ಹೊರಟರು. ಆ ಕಾಲದಲ್ಲಿ ತಿರುಪತಿಗೆ ಬಸ್ಸು, ರೈಲುಗಳ ಸೌಕರ್ಯ ಹೆಚ್ಚಾಗಿರಲಿಲ್ಲವಾದ್ದರಿಂದ ಸ್ವಲ್ಪ ಕಷ್ಟವಾದರೂ ತೊಂದರೆಯಿಲ್ಲವೆಂದು ಯೋಚಿಸಿ ಕುಟುಂಬ ಸಮೇತರಾಗಿ ಹೋಗಿ ಹರಸಾಹಸ ಮಾಡಿ ವೆಂಕಟರಮಣನ ದರ್ಶನ ಭಾಗ್ಯ ಪಡೆದು ಕುಟುಂಬ ವರ್ಗದವರು ಭೋಜನ ಮುಗಿಸಿ ದಣಿವಾರಿಸಿಕೊಳ್ಳಲು ಕೊಠಡಿಯಲ್ಲಿ ಎಲ್ಲರೂ ವಿಶ್ರಮಿಸುತ್ತಿದ್ದರು. ತಿಮ್ಮಪ್ಪನ ದರ್ಶನ ನಂತರ ಭೋಜನ ಮುಗಿಸಿದ ಎಲ್ಲರೂ ತುಸು ಹೊತ್ತಿನಲ್ಲಿಯೇ ನಿದ್ರೆಗೆ ಜಾರಿದರು. ನಿದ್ರೆಯಲ್ಲಿ ಬಾಲಗಾರ್ ಶ್ಯಾಮರಾಯರಿಗೆ ಒಂದು ಸುಂದರವಾದ ಕನಸು ಬಿತ್ತು. ಯಾರೋ ಬಂದು ಬೆನ್ನಿನ ಮೇಲೆ ಜೋರಾಗಿ, ಬಹಳ ಜೋರಾಗಿ ಏಟು ಕೊಟ್ಟಂತಾಯಿತು. ನಾನು ಈ ರಸ್ತೆಯಲ್ಲಿರುವ ಕೊನೆ ಅಂಗಡಿಯಲ್ಲಿ ವಾಸವಾಗಿದ್ದೇನೆ.
ನೀನು ನನ್ನ ದಾಸನಾಗು ಎಂದು ಅಶರೀರ ವಾಣಿ ನುಡಿದು ಮಾಯವಾದಂತೆ ಭಾಸವಾಯಿತು. ನಿದ್ರೆಯಲ್ಲಿದ್ದ ಅವರು ಬೆಚ್ಚಿಬಿದ್ದು ಆಶ್ಚರ್ಯಚಕಿತರಾಗಿ ಎದ್ದು ತನ್ನ ಹೆಂಡತಿಯನ್ನು ಎಬ್ಬಿಸಿ ಕನಸು ಕಂಡದ್ದನ್ನು ವಿವರವಾಗಿ ಹೇಳಿದರು. ಆಗ ಅವರ ಬೆನ್ನು ನೋಡಿದಾಗ ಬೆನ್ನಿನಷ್ಟು ಅಗಲವಾದ ಕೈಗುರುತು ಬಿದ್ದಿತ್ತು. ಆಜಾನುಬಾಹುವಾದ ಅವರ ಅಗಲವಾದ ಬೆನ್ನಿನ ಮೇಲೆ ಕೆಂಪಗೆ ಬಿದ್ದ ಆ ಕೈ ಬೆರಳುಗಳ ಗುರುತನ್ನು ನೋಡಿದ ಪದ್ಮಾವತಮ್ಮ ಅವರು ಈ ದೊಡ್ಡ ಗುರುತು ದೊಡ್ಡ ಕೈಗಳು ಮನುಷ್ಯರದಾಗಲು ಸಾಧ್ಯವೇ ಇಲ್ಲ ಇದೆಲ್ಲಾ ವೆಂಕಟರಮಣನ ಪವಾಡವೇ ಸರಿ ಎಂದು ಆಶ್ಚರ್ಯಚಕಿತರಾಗಿಯೂ, ಆನಂದ ಭರಿತರಾಗಿಯೂ ದಿಗ್ಬ್ರಮೆಗೊಂಡು ಅಳಲಾರಂಭಿಸಿದರು. ಒಂದು ಕ್ಷಣ ಬಾಲಗಾರ್ ಶ್ಯಾಮರಾಯರಿಗೂ ಏನು ಮಾಡಬೇಕೆಂಬುದೇ ಹೊಳೆಯಲಿಲ್ಲ. ಆ ಕ್ಷಣ ಅವರು ರೋಮಾಂಚನಗೊಂಡರು. ಅವರ ಮೈಯಲ್ಲಿ ವಿದ್ಯುತ್ ಸಂಚರಿಸಿದಂತೆ ಆಯಿತು.
ತಿರುಪತಿ ತಿಮ್ಮಪ್ಪ, ಏಡುಕೊಂಡಲವಾಡ ವೆಂಕಟೇಶ, ಬಾಲಾಜಿ, ಶ್ರೀನಿವಾಸ ಸಿಕ್ಕಿದ ದಿನದಿಂದಲೇ ಬಾಲಗಾರ್ ಶ್ಯಾಮರಾಯರ ಜೀವನದಲ್ಲಿ ಬಹಳ ಪರಿವರ್ತನೆಯಾಗುತ್ತದೆಂದು ತಿಳಿದು ಯೋಚಿಸಿದರು. ಆದರೆ ಕನಸಿನಲ್ಲಿ ಬಂದದ್ದೆಲ್ಲಾ ನಿಜವೇ ? ನಿಜವಾಗಲು ಸಾಧ್ಯವೇ ? ಎಂದು ಕೊಂಡು ಸುಮ್ಮನಾಗಿಬಿಟ್ಟರು. ಆದರೂ ಮನಸ್ಸು ಕೇಳದೆ ಅದೇ ರಸ್ತೆಯ ಕೊನೆಯಲ್ಲಿ ಇರುವ ಅಂಗಡಿಗೆ ಹೋಗಿ ನನಗೆ ಈ ತರಹದ ಕನಸು ಬಿತ್ತೆಂದು ಹೇಳಿದರು. ಈ ವಾರ್ತೆಯನ್ನು ಕೇಳುತ್ತಿದ್ದಂತೆ ಅಂಗಡಿಯವರಿಗೆ ಪರಮಾಶ್ಚರ್ಯವಾಯಿತು. ಅವರಿಗೂ ಸಹ ಕನಸು ಬಿದ್ದಿತ್ತು. ನಿಮ್ಮ ಅಂಗಡಿಗೆ ಒಬ್ಬ ಬ್ರಾಹ್ಮಣರು ಬರುತ್ತಾರೆ. ಅವರಿಗೆ ನೀನು ಕೆತ್ತಿದ ಈ ರಕ್ತಚಂದನದ ವಿಗ್ರಹಗಳನ್ನು ಕೊಟ್ಟುಬಿಡು ಎಂದು ಯಾರೋ ಬಂದು ಹೇಳಿದಂತಾಯಿತೆಂದು ಹೇಳಿದರು.
ಈ ವೆಂಕಟರಮಣ ವಿಗ್ರಹ ಎಡಬದಿ ಮಹಾಲಕ್ಷ್ಮಿ ಬಲಭಾಗದಲ್ಲಿ ಪದ್ಮಾವತಿ ವಿಗ್ರಹಗಳನ್ನು ಹೊಂದಿದೆ. ಮುಂದೆ ಆಂಜನೇಯ, ಗಣೇಶ, ಲಕ್ಷ್ಮಿ, ರಾಮ, ಮುಂತಾದ ದೇವರುಗಳ ವಿಗ್ರಹಗಳು ಮಣೆಯಲ್ಲಿ ಎಲ್ಲಾ ದೇವರುಗಳನ್ನು ಅವರವರ ಸ್ಥಳಗಳಲ್ಲಿ ಕೂರಿಸುವಂತೆ ವಿನ್ಯಾಸ ಮಾಡಿರುವುದು ಸಹ ಒಂದು ವಿಶೇಷ. ಬೇರೆ ಸ್ಥಳದಲ್ಲಿ ಕುಳ್ಳಿರಿಸಿದರೆ ಅದು ಕುಳಿತುಕೊಳ್ಳುವುದಿಲ್ಲ. ಇಂತಹ ಅದ್ಭುತವಾದ ದೇವರುಗಳನ್ನು ವೆಲ್‍ವೆಟ್ ಬಟ್ಟೆಯಲ್ಲಿ ಸುತ್ತಿ ದೊಡ್ಡ ಬೆಳ್ಳಿ ತಟ್ಟೆಯಲ್ಲಿಟ್ಟು ಶ್ರೀಯುತ ಬಾಲಗಾರ್ ಶ್ಯಾಮರಾವ್‍ರವರಿಗೆ ಕೊಟ್ಟು, ಸ್ವಾಮಿ ನೀವೆಂಥಾ ದೈವ ಭಕ್ತರು ಯಾರಿಗೋ ತಲುಪಬೇಕಾದ ಈ ವೆಂಕಟರಮಣ ನಿಮಗೆ ತಲುಪಿದೆ. ನಿಮ್ಮ ಮೇಲೆ, ನಿಮ್ಮ ಕುಟುಂಬದವರ ಮೇಲೆ ಸಂಪೂರ್ಣ ವೆಂಕಟರಮಣನ ದಯೆ, ಅನುಗ್ರಹವಿದೆ ಎಂದು ಹೇಳಿ ವಿಗ್ರಹಗಳನ್ನು ಕೊಟ್ಟರು. ಇಬ್ಬರ ಕಣ್ಣುಗಳಲ್ಲಿಯೂ ಆನಂದ ಬಾಷ್ಪ ಉಕ್ಕಿ ಹರಿಯುತ್ತಿತ್ತು. ಮೈಯಲ್ಲಿ ರೋಮಾಂಚನವಾಯಿತು.
ಆ ದಿನದಿಂದಲೇ ಬಾಲಗಾರ್ ಶ್ಯಾಮರಾವ್‍ರವರ ಜೀವನದಲ್ಲಿ ಬಹಳ ಪರಿವರ್ತನೆಯಾಯಿತು. ಅವರು ಅಂದಿನಿಂದ ತನ್ನ ಕರ್ತವ್ಯವಾದ ಟೈಲರಿಂಗ್ ಕೆಲಸ ಮಾಡುವುದು, ಬೇಟೆಗೆ ಹೋಗುವುದು, ಎಲ್ಲವನ್ನು ತ್ಯಜಿಸಿ, ವೆಂಕಟರಮಣನ ದಾಸಾನುದಾಸರಾದರು. ಬಾಲಗಾರ್ ಶ್ಯಾಮರಾವ್ ಅವರು ಹೆಂಡತಿ ಮಕ್ಕಳೊಂದಿಗೆ ತೀರ್ಥಯಾತ್ರೆಗಳಿಗೆ ಹೋಗುವುದನ್ನು ಪ್ರಾರಂಭಿಸಿದರು. ಬಾಲಗಾರ್ ಶ್ಯಾಮರಾವ್ ಅವರ ಬಳಿ ಒಂದು ಚಿಕ್ಕ ತಂಬೂರಿ ಇತ್ತು. ಅದನ್ನು ತೆಗೆದುಕೊಂಡು ಮನೆ ಮನೆಗಳಿಗೆ ಹೋಗಿ ಪುರಂದರ ದಾಸರು, ಕನಕದಾಸರು, ಗೋಪಾಲ ದಾಸರುಗಳ ಹಾಡುಗಳನ್ನು ಬರೆದು ಹಾಡುತ್ತಾ, ಆಯಾಯ ದಿನಗಳಿಗೆ ಬೇಕಾದಷ್ಟು ಮಾತ್ರ ಅಕ್ಕಿ, ಬೇಳೆ, ಭಿಕ್ಷೆ ತಂದು ಕುಟುಂಬದವರು ಊಟ ಮಾಡುತ್ತಿದ್ದರು. ಸ್ವಲ್ಪವೂ ಮಕ್ಕಳಿಗಾಗಿ, ನಾಳೆಗಾಗಿ ಇಟ್ಟುಕೊಳ್ಳಲು ಬಿಡುತ್ತಿರಲಿಲ್ಲ. ಆ ವೆಂಕಟರಮಣ ಕೊಡುತ್ತಾನೆ. ಯೋಚಿಸಬೇಡವೆಂದು ಹೇಳುತ್ತಿದ್ದರು.
ಅವರ ಪುಸ್ತಕಗಳು
ಅವರು ಬರೆದ ಎರಡು ಪುಸ್ತಕಗಳು, ಅವುಗಳಲ್ಲಿ ಬರೆದ ಸುಳಾದಿಗಳು, ದಾಸರ ಕೃತಿಗಳು, ಉಗಾಭೋಗಗಳು, ಇಂದಿಗೂ ಇವೆ. ಅವರು ಅಲ್ಲಲ್ಲಿ ಹರಿಕಥೆಗಳನ್ನು ಸಹ ಮಾಡುತ್ತಿದ್ದರು.
ಬಾಲಗಾರ್ ಶ್ಯಾಮರಾಯರು ಬೆಂಗಳೂರಿನಲ್ಲಿ ಚಾಮರಾಜಪೇಟೆಯಲ್ಲಿ ಸ್ವಂತ ಮನೆಯನ್ನು ಹೊಂದಿದ್ದರೆಂದೂ ಆ ಮನೆಯನ್ನು ಯಾರೋ ಒಬ್ಬರಿಗೆ ದಾನವಾಗಿ ಬಿಟ್ಟು ಹೋದರೆಂದೂ ಪುಸ್ತಕದ ಪ್ರಕಾರ ಮಾಹಿತಿ ಇದೆ. ಆ ಪುಸ್ತಕದಲ್ಲಿ ಅವರು ಆ ಮನೆಯಲ್ಲಿ ಇಟ್ಟಿರುವ ವಸ್ತುಗಳ ಪಟ್ಟಿಯನ್ನು ಸಹ ಬರೆದಿರುತ್ತಾರೆ. ಆ ನಂತರ ದಸರಾದ ಮಣ್ಣಿನ ಗೊಂಬೆಗಳನ್ನು ಇಟ್ಟಿದ್ದನ್ನು ನಾವು ಕಂಡಿದ್ದೇವೆ.
ಮುಂದಿನ ಪೀಳಿಗೆ
ಪದ್ಮಾವತಮ್ಮ, ಬಾಲಗಾರ್ ಶ್ಯಾಮರಾವ್ ನಂತರ ಅವರ ಮಗನಾದ ಬಾಲಗಾರ್ ಶ್ಯಾಮರಾವ್ ರಾಮಾಚಾರ್ ಮತ್ತು ಮುಂಡರಗಿ ಸರಸ್ವತಿಬಾಯಿ ಅವರು ಮತ್ತು ಅವರ ಆರು ಜನ ಮಕ್ಕಳಾದ ಜಲಜಾಕ್ಷಿ, ವಿಜಯಕುಮಾರ್, ಪಂಕಜ, ವಾರಿಜ, ನಳಿನಿ, ವೇಣು (ಪ್ರಸನ್ನ) ಮತ್ತು ಸೊಸೆಯಂದಿರು, ಅಳಿಯಂದಿರು, ಪೂಜೆ ನಡೆಸಿಕೊಂಡು ಬರುತ್ತಿದ್ದಾರೆ. ರಾಮಾಚಾರ್ ಅವರ ನಿಧನದ ನಂತರ ಸರಸ್ವತಿ ಬಾಯಿಯವರ ಮಕ್ಕಳು ಬೆಂಗಳೂರಿನಲ್ಲಿ ವಾಸವಾಗಿರುವುದರಿಂದ ದೊಡ್ಡ ಮಗಳಾದ ಜಲಜಾಕ್ಷಿ ರಮೇಶ್ (ಹನುಮೇಶ್) ಅವರ ಮನೆಯಲ್ಲಿಯೇ ಸರಸ್ವತಿ ಬಾಯಿಯವರು ಇದ್ದರು. ನೀನೆಲ್ಲೊ ನಾನಲ್ಲೆ ಎಂಬಂತೆ ಸರಸ್ವತಿ ಬಾಯಿಯವರೊಡನೆ ವೆಂಕಟರಮಣನೂ ಬಂದನು. ರಮೇಶ್‍ರವರಿಂದ ಪೂಜೆಗಳು, ವಿಜಯದಶಮಿಯಂದು ಅಭಿಷೇಕ ಎಲ್ಲವೂ ನಡೆಯುತ್ತಿತ್ತು.
ಬಾಲಗಾರ್ ಶ್ಯಾಮರಾವ್ ರಾಮಾಚಾರ್ ಮತ್ತು ಮುಂಡರಗಿ ಸರಸ್ವತಿಬಾಯಿ
ಜಲಜಾಕ್ಷಿ ಮತ್ತು ರಮೇಶ್
ಜಲಜಾಕ್ಷಿ ರಮೇಶ್‍ರವರ ಮೊದಲನೇ ಮಗಳಾದ ವೀಣಾ ಮತ್ತು ಅವರ ಪತಿ ರಮೇಶ್ ಮಗಳು ರಶ್ಮಿ ಎಲ್ಲರೂ ಸಹ ಪೂಜೆಗೆ, ಅನ್ನದಾನಕ್ಕೆ ನೆರವಾಗುತ್ತಿದ್ದರು. ಜಲಜಾಕ್ಷಿ ರಮೇಶ್ ಅವರ 2ನೇ ಮಗಳಾದ ರಂಜನಿಯನ್ನು ಅವರ ತಮ್ಮನಾದ ಪ್ರಸನ್ನ (ವೇಣು)ಗೆ ಕೊಟ್ಟು ವಿವಾಹ ಮಾಡಿರುವುದರಿಂದ ಈಗ ಸದ್ಯದಲ್ಲಿ ಪ್ರಸನ್ನ ಅವರ ಕುಟುಂಬದಿಂದ ರಂಜನಿ, ನಿಖಿಲ್, ಪ್ರಜ್ವಲ್ ಅವರ ಸಹಕಾರದಿಂದ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಬಾಲಗಾರ್ ಶ್ಯಾಮರಾವ್, ರಾಮಾಚಾರ್, ಪ್ರಸನ್ನ, ನಿಖಿಲ್, ಪ್ರಜ್ವಲ್ ಹೀಗೆ 4ನೇ ತಲೆಮಾರಿನವರ ಪೂಜೆಗಳು ನಡೆಯುತ್ತಿವೆ.
ವೆಂಕಟರಮಣನ ಪೂಜೆಗಳು
ಮರದ ವಿಗ್ರಹಗಳಾಗಿರುವುದರಿಂದ ಪ್ರತಿ ವರ್ಷಕ್ಕೊಮ್ಮೆ ವಿಜಯದಶಮಿ ದಿನದಂದು ವಿಜೃಂಭಣೆಯಿಂದ ಪಂಚಾಮೃತ ಅಭಿಷೇಕ, ಪೂಜೆಗಳು, ಮುತೈದೆಯರಿಗೆ ಉಡಿತುಂಬುವುದು, ಹಾಡು, ಅನ್ನದಾನ ಎಲ್ಲಾ ಕೈಂಕರ್ಯಗಳು ನಡೆಸಿಕೊಂಡು ಬರಲಾಗುತ್ತಿದೆ. ದೇವರನ್ನು ಭಕ್ತಿಯಿಂದ ಪೂಜಿಸಿದಂತೆ ದೇವರು ಭಕ್ತರಿಗೆ ವರಗಳನ್ನು ಕೊಡುತ್ತಾ ಬರುತ್ತಿದ್ದಾನೆ. ಭಕ್ತರ ಬೇಡಿಕೆಗಳನ್ನು ಈಡೇರಿಸುತ್ತಿದ್ದಾನೆ. ಭಕ್ತರ ಸಂಕಟಗಳನ್ನು ನಿವಾರಿಸುತ್ತಾ ಬರುತ್ತಿದ್ದಾನೆ. ಎಲ್ಲರಿಗೂ ಜೀವನ ಪಥ ಸಾಗಿಸಲು ಧೈರ್ಯ ತುಂಬುತ್ತಿದ್ದಾನೆ.
ಸಂಕಟ ಬಂದಾಗ ವೆಂಕಟರಮಣ ಎಂಬಂತೆ ನಂಬಿ ಕರೆದರೆ, ಓ ಎಂದು ಓಡಿ ಬರುತ್ತಾನೆ ವೈಕುಂಠಪತಿ, ಈ ವೆಂಕಪ್ಪನ ಪವಾಡಗಳು ಒಂದಾ ಎರಡಾ, ಬೆಟ್ಟದಷ್ಟು.
ಮಗಳಾದ ರಮಾಬಾಯಿಯವರು ಹೊಸಪೇಟೆಯಲ್ಲಿನ ನಗರೇಶ್ವರ ಗುಡಿ ಹಾಗೂ ಮುಂತಾದ ಕಡೆಗಳಲ್ಲಿ ಹರಿಕಥೆಗಳನ್ನು ಮಾಡುತ್ತಿದ್ದರು. ಇವರ ಗಿರಿಜಾ ಕಲ್ಯಾಣ, ಲಕ್ಷ್ಮಿ ಸೋಬಾನೆ, ವೆಂಕಟೇಶ ಕಲ್ಯಾಣ ಮುಂತಾದ ದೇವರ ಮಹಿಮೆಗಳನ್ನು ಹೊಸಪೇಟೆಯ ಜನ ಬಹಳ ಆಸಕ್ತಿಯಿಂದ ಆಲಿಸುತ್ತಾ ಬರುತ್ತಿದ್ದರು.
ಪವಾಡಗಳು
ಒಮ್ಮೆ ಒಬ್ಬ ವ್ಯಕ್ತಿಯೊಬ್ಬರು ಬಾಲಗಾರ್ ಶ್ಯಾಮರಾವ್‍ರವರ ಮನೆಗೆ ಬಂದು ನನಗೆ ತುಂಬಾ ಹೊಟ್ಟೆ ನೋವು ಆಗುತ್ತಿದೆ. ಊಟ ಸೇರುತ್ತಿಲ್ಲ. 3, 4 ದಿನಗಳಿಂದ ಊಟ ಮಾಡಿಲ್ಲ ಎಂದು ತಮ್ಮ ಸಂಕಟವನ್ನು ತೋಡಿಕೊಂಡರು. ಆಗ ದೇವರ ಪ್ರಸಾದವಾದ ಬಿಸಿಯಾದ ಅನ್ನಕ್ಕೆ ತುಪ್ಪ ಮತ್ತು ಉಪ್ಪು ಬೆರೆಸಿ ತಿನ್ನಲು ಕೊಟ್ಟರು. ಅದನ್ನು ನಿಧಾನವಾಗಿ ತಿಂದ ಆ ವ್ಯಕ್ತಿಗೆ ಸ್ವಲ್ಪ ಸಮಯದಲ್ಲೇ ಹೊಟ್ಟೆ ನೋವು ಮಾಯವಾಯಿತು. ನೋವಿನಿಂದ ಬಳಲುತ್ತಿರುವ ಅವರು ಎದ್ದು ಕುಳಿತು, ಸ್ವಾಮಿ ನಿಮ್ಮ ದಯೆಯಿಂದ ನನಗೆ ಹೊಟ್ಟೆ ನೋವು ಮಾಯವಾಯಿತು ಎಂದರು. ಆಗ ಬಾಲಗಾರ್ ಶ್ಯಾಮರಾವ್‍ರವರು ಇದೆಲ್ಲಾ ಶ್ರೀನಿವಾಸನ ದಯೆ ಎಂದು ಹೇಳಿದರು. ಇದರಿಂದ ಸಂತೋಷಪಟ್ಟ ಅವರು ವೆಂಕಟರಮಣ, ಲಕ್ಷ್ಮಿದೇವಿ, ಪದ್ಮಾವತಿ ದೇವರ ವಿಗ್ರಹಗಳಿಗೆ ಬೆಳ್ಳಿ ಕಿರೀಟಗಳನ್ನು ಮಾಡಿಸಿ ಕೊಟ್ಟಿರುತ್ತಾರೆ.
ಭಾರತಿ ಎಂಬುವರ ದಾಂಪತ್ಯ ಜೀವನದಲ್ಲಿ ಬಹಳ ದೊಡ್ಡ ಸಮಸ್ಯೆಯಾಗಿ ವಿಚ್ಛೇದನದವರೆಗೂ ಬಂದು ಬಿಟ್ಟಿತ್ತು. ಭಾರತಿ ಅವರು ಒಂದು ದಿನ ಬಂದು ವೆಂಕಟರಮಣನ ಮುಂದೆ ನಿಂತು ಗಳಗಳನೆ ಅಳುತ್ತಿದ್ದರು. ಆಗ ಸರಸ್ವತಿಬಾಯಿಯವರು ಕಾರಣ ಕೇಳಿದಾಗ ಅವರ ಸಮಸ್ಯೆ ಹೇಳಿದರು. ವೆಂಕಟರಮಣನಿಗೆ ಏನಾದರೂ ಹರಕೆ ಹೊತ್ತುಕೊಳ್ಳಿ ಎಲ್ಲಾ ಸರಿಹೋಗುತ್ತದೆಂದು ಹೇಳಿದರು. ಆಗ ಭಾರತಿ ವೆಂಕಟರಮಣನಿಗೆ ಹರಕೆ ಹೊತ್ತುಕೊಂಡರು. ಸ್ವಲ್ಪ ದಿನಗಳಲ್ಲಿಯೇ ಅವರ ಸಂಸಾರ ಒಂದಾಯಿತು. ಆಗ ಆ ದಂಪತಿಗಳು ಬಂದು ವೆಂಕಟರಮಣನಿಗೆ ಹಣ್ಣು ಕಾಯಿ ಪೂಜೆ ಮಾಡಿಸಿ ಬಾಳನ್ನು ಬಂಗಾರ ಮಾಡಿದ ಲಕ್ಷ್ಮೀ, ಪದ್ಮಾವತಿ ದೇವಿಯರಿಗೆ ಬಂಗಾರದ ಮಾಂಗಲ್ಯಗಳನ್ನು ಮಾಡಿಸಿಕೊಟ್ಟರು. ಹೀಗೆ ದೇವರು ತನ್ನ ಪವಾಡಗಳನ್ನು ತೋರಿಸುತ್ತಾ ಬರುತ್ತಿದ್ದಾನೆ.
ಸುಮಾ ಮುರಳಿ ಮತ್ತು ಪ್ರಿಯಾಂಕ, ಲಕ್ಷ್ಮಣರಾವ್ ಕುಟುಂಬದವರು ಶ್ರೀನಿವಾಸ ದೇವರಿಗೆ ತಮ್ಮ ಬೇಡಿಕೆ ಈಡೇರಿಸಿದ್ದಕ್ಕಾಗಿ ಬಂಗಾರದ ಸರ ಮಾಡಿಸಿಕೊಟ್ಟಿರುತ್ತಾರೆ.
ಪಂಕಜ ಗುರುರಾಜ ಅವರ ಕುಟುಂಬದ ಇಷ್ಟಾರ್ಥಗಳು ನೆರವೇರಿದ್ದಕ್ಕಾಗಿ ವೆಂಕಟೇಶನಿಗೆ ಪೂಜೆಗಳು ಅನ್ನದಾನಕ್ಕೂ ನೆರವಾಗುತ್ತಾ ಬಂದಿದ್ದಾರೆ. ಅವರ ಮಕ್ಕಳು ಸುಮಾ, ದಿವ್ಯ ಅವರುಗಳು ಸಹ ಪೂಜಾ ಕಾರ್ಯಕ್ಕೆ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ. ಇವರ ಅಳಿಯಂದಿರಾದ ಮುರಳಿ, ನವೀನ್ ಹಾಗೂ ಮೊಮ್ಮಕ್ಕಳಾದ ಪ್ರಿಯಾಂಕ, ತನುಶ್ರೀ ಎಲ್ಲರೂ ಸಹಕಾರ ನೀಡುತ್ತಿದ್ದಾರೆ.
ವಾರಿಜ, ಶ್ರೀನಿವಾಸ್, ಲತಾ, ನವೀನ್ ಇವರ ಕುಟುಂಬಗಳಿಂದ ಶ್ರೀನಿವಾಸನ ಪೂಜೆ ಮಾಡಿಸುತ್ತಾ ಬರುತ್ತಿದ್ದಾರೆ. ವಾರಿಜ ಶ್ರೀನಿವಾಸರವರು ತಮ್ಮ ಇಷ್ಟಾರ್ಥಗಳು ನೆರವೇರಿದ್ದಕ್ಕಾಗಿ ದೇವರಿಗೆ ಬೆಳ್ಳಿ ಸರಗಳನ್ನು, ಮುತ್ತಿನ ಸರಗಳನ್ನು ಮಾಡಿಸಿಕೊಟ್ಟಿರುತ್ತಾರೆ. ಬೆಳ್ಳಿ ಕಾಮಾಕ್ಷಿ ದೀಪ, (ಶಂಖ, ಚಕ್ರಗಳಿಂದ ಕೂಡಿದ) ವಿಷ್ಣು ಪಾದಗಳನ್ನು ಕೊಟ್ಟಿರುತ್ತಾರೆ. ದೇವರನ್ನು ಭಕ್ತಿಯಿಂದ ಸ್ಮರಿಸುತ್ತಿರುವಾಗ ಭಕ್ತರ ಆಸೆ ಆಕಾಂಕ್ಷೆಗಳನ್ನು ಈಡೇರಿಸುತ್ತಾ ಬರುತ್ತಿದ್ದಾನೆ.
ಶ್ರೀನಿವಾಸ್ ವಿಠ್ಠಲ್‍ರವರ ಕುಟುಂಬದವರು ಸಹ ವೆಂಕಟರಮಣನ ಪೂಜೆಗೆ ಬಹಳ ಸಹಕರಿಸುತ್ತಾರೆ. ಕುಟುಂಬದ ಎಲ್ಲಾ ಸದಸ್ಯರು ಬಂದು ಪೂಜಾ ಕಾರ್ಯಗಳಿಗೆ ಅಭಿಷೇಕ, ಅನ್ನದಾನ ಸೇವೆಗಳಿಗೆ ಬಹಳ ಸಹಕಾರ ನೀಡುತ್ತಾರೆ. ಲತಾ ನಾಗರಾಜ್ ವಿಠ್ಠಲ್‍ರವರು ಸಹ ನೆರವಾಗುತ್ತಾ ಬಂದಿದ್ದಾರೆ. ಇವರ ಮನೆಯಲ್ಲಿ 4 ತಲೆಮಾರುಗಳ ಕುಟುಂಬದವರು ವಾಸವಾಗಿದ್ದಾರೆಂದು ಹೇಳಲು ಹೆಮ್ಮೆ ಅನಿಸುತ್ತದೆ.
ನಳಿನಿ ಪ್ರಸಾದ್ ಮತ್ತು ವಿನಯ್, ರಮ್ಯ ಇವರುಗಳ ಕುಟುಂಬದಿಂದಲೂ ಸಹ ತಮ್ಮ ಬೇಡಿಕೆಗಳು ಈಡೇರಿರುವುದರಿಂದ ದೇವರಿಗೆ ಪ್ರತಿ ವರ್ಷವೂ ದೇವರ ಪೂಜೆಗೆ ಉಪಯುಕ್ತವಾದ ವಸ್ತುಗಳನ್ನು ಮಾಡಿಸಿಕೊಡುತ್ತಿದ್ದಾರೆ. ಪಂಚಾಮೃತ ಅಭಿಷೇಕಕ್ಕೆ ಉಪಯುಕ್ತವಾದಂತಹ ಹಿತ್ತಾಳೆ ಮಣೆ, ಗೋಮುಖ, ಹಿತ್ತಾಳೆ ತಟ್ಟೆಗಳು, ದೀಪದ ಸ್ಟ್ಯಾಂಡ್, ಮರದ ಮಂಟಪ ಮುಂತಾದವುಗಳನ್ನು ಮಾಡಿಸಿ ಕೊಟ್ಟಿರುತ್ತಾರೆ.
ಜಲಜ ರಮೇಶ್‍ರವರ ದೊಡ್ಡ ಮಗಳಾದ ವೀಣಾ, ರಮೇಶ್, ಅಳಿಯ ರಮೇಶ್‍ರವರು ತಮ್ಮ ಮಗಳಾದ ರಶ್ಮಿ ಮದುವೆಯಾಗಬೇಕೆಂದು ದೇವರಲ್ಲಿ ಭಕ್ತಿಯಿಂದ ಬೇಡಿಕೊಂಡಾಗ, ಮದುವೆ ನಿಶ್ಚಯವಾಗಿ, ನಿಶ್ಚಿತಾರ್ಥ ಒಂದು ವಾರದಲ್ಲಿ ಆಗಿ ಒಂದೇ ತಿಂಗಳಲ್ಲಿ ಮಗಳಾದ ರಶ್ಮಿ ಮದುವೆ ವಿಜ್ರಂಭಣೆಯಿಂದ ನಡೆದೇ ಹೋಯಿತು. ಇದೊಂದು ಪವಾಡವೇ ಸರಿ ಎಂದರೆ ಆಶ್ಚರ್ಯವಾಗಲಾರದು. ಇವರ ಮನೆ ದೇವರು ಸಹ ಗೌರಿಬಿದನೂರಿನ ಸಮೀಪವಿರುವ ದಾರಿನಾಯಕನಪಾಳ್ಯದ ವೆಂಕಟರಮಣ ಎಂಬುದನ್ನು ಈ ಸಮಯದಲ್ಲಿ ಸ್ಮರಿಸಬಹುದು.
ಸರಸ್ವತಿಬಾಯಿ ಅವರ ಅಣ್ಣನ ಮಗಳಾದ ಮಂಜುಳ ಅವರು ತನ್ನ ಮಗಳಾದ ಸ್ವಾತಿಯ ಮದುವೆಯಾಗಬೇಕೆಂದು ಯೋಚಿಸುತ್ತಿದ್ದರು. ಒಮ್ಮೆ ಬೆಂಗಳೂರಿನ ಜಲಜಾರವರ ಮನೆಗೆ ಬಂದಾಗ ಈ ವಿಷಯ ಪ್ರಸ್ತಾಪ ಮಾಡಲಾಯಿತು. ಆಗ, ಜಲಜಾ ಅವರು ನಮ್ಮ ಮನೆಯ ವೆಂಕಟರಮಣನನ್ನು ಬೇಡಿಕೋ, ನಿಮ್ಮ ಆಸೆಯೂ ನೆರವೇರುತ್ತದೆಂದು ಹೇಳಿದರು. ಆ ತಕ್ಷಣ 101ರೂಗಳು ದೇವರ ಪಾದದ ಬಳಿ ಇಟ್ಟು ಭಕ್ತಿ ಪೂರ್ವಕವಾಗಿ ಮಂಜುಳ, ಸ್ವಾತಿ ಎಲ್ಲರೂ ಬೇಡಿಕೊಂಡರು. ಕೆಲವೇ ತಿಂಗಳುಗಳಲ್ಲಿ ಸ್ವಾತಿ ಮದುವೆ ನಿಶ್ಚಯವಾಗಿ ಅದ್ದೂರಿಯಾಗಿ ದಾವಣಗೆರೆಯಲ್ಲಿ ಮದುವೆಯಾಯಿತು. ಈಗ ಅವಳಿಗೆ ಅವಳಿ ಜವಳಿ ಮುದ್ದಾದ ಮಕ್ಕಳು ಆಗಿದ್ದಾರೆ. ಈ ವೆಂಕಟರಮಣನು ಎಲ್ಲರ ಸಂತೋಷಕ್ಕೆ ಕಾರಣನಾಗಿದ್ದಾನೆಂದರೆ ಅತಿಶಯೋಕ್ತಿಯಾಗಲಾರದು.
ಒಮ್ಮೆ ಸರಸ್ವತಿಬಾಯಿಯವರ ದೊಡ್ಡ ಅಣ್ಣನ ಮಗಳು ಪದ್ಮ ನಾನು ದೇವರನ್ನು ಸ್ವಚ್ಛಗೊಳಿಸುತ್ತೇನೆಂದು ಬಂದರು. ಜಲಜರವರು, ಪರವಾಗಿಲ್ಲ ನಾನೇ ತೊಳೆಯುತ್ತೇನೆಂದು ಹೇಳಿದರೂ ಕೇಳಲಿಲ್ಲ. ಪದ್ಮ ಅವರು ಎಲ್ಲಾ ದೇವರುಗಳನ್ನು ತೊಳೆದು ಒರೆಸಿದರು. ಆದರೆ, ವೆಂಕಟರಮಣನ ವಿಗ್ರಹವನ್ನು ತೊಳೆಯುವಾಗ ಮಾತ್ರ ಅವರಿಗೆ ಏನೋ ಒಂದು ತರಹದ ರೋಮಾಂಚನವಾಯಿತು. ಪದ್ಮಾರವರಿಗೆ ಮುಂದೆ ತೊಳೆಯಲು ಸಾಧ್ಯವಾಗದೆ ಒಂದೇ ಸಮನೇ ಅಳಲಾರಂಭಿಸಿದರು. ಈ ದೇವರಲ್ಲಿ ಅಗಾಧವಾದ ಶಕ್ತಿ ಇದೆ ಎಂದು ಈ ಸನ್ನಿವೇಶದಿಂದ ತಿಳಿಯಬಹುದು.
ಬಾಲಗಾರ್ ಶ್ಯಾಮರಾಯರು ಎಲ್ಲಾ ಊರುಗಳನ್ನು ತಿರುಗಿ ದೇವರನಾಮಗಳನ್ನು ಸರಳವಾಗಿ ಹಾಡಿ, ಹರಿಕಥೆಗಳನ್ನು ಮಾಡಿ, ತಮ್ಮ ಮಗಳಾದ ರಮಾಬಾಯಿಯವರಿಂದಲೂ ಮಾಡಿಸುತ್ತಿದ್ದರು. ಅವರು ಊರುಗಳಿಗೆ ಹೋದಾಗ ಹರಿಕಥೆಗಳನ್ನು ಮಾಡುವ ದೇವಸ್ಥಾನದಲ್ಲಿ ತಂಗುತ್ತಿದ್ದರಂತೆ. ಹೀಗೆ ಒಮ್ಮೆ ಧ್ಯಾನಾಸಕ್ತರಾಗಿದ್ದಾಗ ಒಂದು ಹಾವು ತೊಡೆ ಮೇಲೆ ಹತ್ತಿ ಆ ಕಡೆಯಿಂದ ಈ ಕಡೆ ಹರಿದು ಹೋಯಿತಂತೆ. ಅದು ಸಹ ಶ್ಯಾಮರಾಯರ ಗಮನಕ್ಕೆ ಬರಲಿಲ್ಲವಂತೆ. ಆದರೆ ಪದ್ಮಾವತಮ್ಮ ಮತ್ತು ಮಕ್ಕಳು ನೋಡಿ ಬೆಕ್ಕಸ ಬೆರಗಾಗಿ ನಿಂತಿದ್ದರು. ಹಾವು ಹೋದ ಬಳಿಕ ಶ್ಯಾಮರಾಯರಿಗೆ ತಿಳಿಸಿದರಂತೆ.
ಕೊನೆಯಲ್ಲಿ ಗಂಗಾವತಿಯ ಜಂತಕಲ್ ಎಂಬ ಗ್ರಾಮದಲ್ಲಿ ವಾಸವಾಗಿದ್ದರಂತೆ. ಆಗ ಅವರಿಗೆ ಮಧುಮೇಹ ಬಂದಿತ್ತೆಂದು ಒಬ್ಬ ಅಜ್ಜಿ ಇವರಿಗೆ ಅಡುಗೆ ಮಾಡಿಕೊಡುತ್ತಿದ್ದರೆಂದೂ ತಿಳಿದು ಬಂದಿದೆ. ಅದೇ ಊರಿನಲ್ಲಿ ಕೊನೆಯುಸಿರೆಳೆದರೆಂದು ತಿಳಿಸಲು ವಿಷಾದವಾಗುತ್ತದೆ. ಆನಂತರ ಪದ್ಮಾವತಮ್ಮ ಮತ್ತು ಮಕ್ಕಳು ಬಳ್ಳಾರಿಗೆ ಬಂದು ವಾಸ್ತವ್ಯ ಹೂಡಿದರೆಂದು ತಿಳಿದು ಬಂದಿದೆ. ಜಂತಕಲ್ ಗ್ರಾಮದ ಗ್ರಾಮಸ್ಥರು ಈಗಲೂ ಸಹ ಬಾಲಗಾರ್ ಶ್ಯಾಮರಾವ್‍ರವರ ಆರಾಧನೆಯನ್ನು 3 ದಿನಗಳ ಕಾಲ ಮಾಡುತ್ತಾರೆಂದು ತಿಳಿದುಬಂದಿದೆ. ಇಲ್ಲಿಗೆ ವೆಂಕಟರಮಣನ ಸತ್ಯವಾದ, ನೈಜವಾದ ಕಥೆಯು ಸಮಾಪ್ತಿಯಾಗುತ್ತದೆಂದು ತಿಳಿಸಲು ಹರ್ಷವಾಗುತ್ತದೆ. ಎಲ್ಲರಿಗೂ ಮಂಗಳವಾಗಲಿ.
ಓಂ ನಮೋ ವೆಂಕಟೇಶಾಯ..............
ಈ ವೆಬ್‌ಸೈಟ್ ಶ್ರೀಯುತರಾದ ಬಾಲಗಾರ್ ಶ್ಯಾಮರಾವ್ ಮತ್ತು ಶ್ರೀಮತಿ ಪದ್ಮಾವತಮ್ಮ ಅವರಿಗೆ ಸಮರ್ಪಿಸಲಾಗಿದೆ.
ನಮ್ಮನ್ನು ಸಂಪರ್ಕಿಸಿ
ಪ್ರಸನ್ನ ಬಿ ಎಸ್
#43/2-1 ಶ್ರೀನಿವಾಸ, 2ನೇ ಮುಖ್ಯ ರಸ್ತೆ,
ಎನ್‌ಜಿಒ ಕಾಲೋನಿ, ಕಮಲಾನಗರ,
ವೃಷಭಾವತಿ ನಗರ, ಜಗದ್ಗುರು ಶಾಲೆ ಹತ್ತಿರ
ಬೆಂಗಳೂರು - 560079
Mobile: +91 8095394293
Email: prasannanikki@gmail.com
Website: www.haresrinivasa.com